ಕ್ಯಾರಿಬೀ ದ್ವೀಪಗಳು

ವೆಸ್ಟ್ ಇಂಡೀಸ್ ದ್ವೀಪಸ್ತೋಮದ ಲೆಸರ್ ಆಂಟಿಲಿಸ್ ದ್ವೀಪಗಳನ್ನು ಈ ಹೆಸರಿನಿಂದಲೂ ಕರೆಯುವುದುಂಟು. ವಿರಳವಾಗಿ ಇಡೀ ವೆಸ್ಟ್ ಇಂಡೀಸ್ ದ್ವೀಪಸ್ತೋಮವನ್ನೇ ಈ ಹೆಸರಿನಿಂದ ಕರೆಯುವುದೂ ಇದೆ. ಇದನ್ನು ಐರೋಪ್ಯರು ಕಂಡುಹಿಡಿದಾಗ ಇಲ್ಲಿ ವಾಸವಾಗಿದ್ದ ಕ್ಯಾರಿಬ್ ಜನರಿಂದಾಗಿ ಈ ದ್ವೀಪಸ್ತೋಮಕ್ಕೆ ಕ್ಯಾರಿಬೀ ಎಂಬ ಹೆಸರು ಬಂದಿದೆ. ಅಮೆರಿಕ ಸಂಯುಕ್ತ ಸಂಸ್ಥಾನ, ಗ್ರೇಟ್ ಬ್ರಿಟನ್, ಫ್ರಾನ್ಸ್, ನೆದರ್‍ಲೆಂಡ್ಸ್ ಮತ್ತು ವೆನಿಜ್ವೀóಲ ದೇಶಗಳಿಗೆ ಸೇರಿದ ದ್ವೀಪಗಳು ಈ ಗುಂಪಿನಲ್ಲಿ ಸೇರಿವೆ. ಈ ದ್ವೀಪಸಮೂಹ ಒಂದು ಸರಪಳಿಯಾಕಾರದಲ್ಲಿ ಪ್ವೆರ್ಟ ರೀಕೊದಿಂದ ವೆನಿಜ್ವೀóಲದ ಉತ್ತರತೀರದ ವರೆಗೂ ವಿಸ್ತರಿಸಿದೆ. ಈ ಸ್ತೋಮದ ಉತ್ತರ ಭಾಗದಲ್ಲಿ ಲೀವರ್ಡ್ ದ್ವೀಪಗಳೂ ದಕ್ಷಿಣ ಭಾಗದಲ್ಲಿ ಲೀವರ್ಸ್ ವಿಂಡ್‍ವರ್ಡ್ ದ್ವೀಪಗಳೂ ಇವೆ. ಗ್ವಾಡಲೂಪ್, ಮಾರ್ಟಿನೀಕ್, ಬಾರ್ಬೇಡೋಸ್, ಟ್ರಿನಿಡಾಡ್ ಮತ್ತು ಟೊಬಾಗೋ ಇಲ್ಲಿಯ ಮುಖ್ಯ ದ್ವೀಪಗಳು.

ಕ್ಯಾರೀಬೀ ದ್ವೀಪಗಳು ಅಗ್ನಿಪರ್ವತಗಳಿಂದಾಗಿದ್ದು ಬೆಟ್ಟಗುಡ್ಡಗಳಿಂದ ಕೂಡಿವೆ. ಮೇ 1902ರಲ್ಲಿ ಗ್ವಾಡಲೂಪ್ ಮತ್ತು ಮಾರ್ಟಿನೀಕ್ ದ್ವೀಪಗಳಲ್ಲಿ ಜೀವಂತ ಅಗ್ನಿಪರ್ವತಗಳಿಂದ ಅಪಾರ ಹಾನಿಗಳು ಸಂಭವಿಸಿದುವು.

ಇಲ್ಲಿಯದು ಉಷ್ಣವಲಯದ ವಾಯುಗುಣ. ಸುತ್ತಮುತ್ತಲಿನ ಸಮುದ್ರಗಳ ಉಷ್ಣ ಪ್ರವಾಹಗಳು ಮತ್ತು ಪೂರ್ವದ ವ್ಯಾಪಾರ ಮಾರುತಗಳು ಇಲ್ಲಿಯ ವಾಯುಗುಣದ ಮೇಲೆ ಪರಿಣಾಮ ಬೀರಿವೆ. ಈ ಪ್ರದೇಶದಲ್ಲಿ ಪದೇ ಪದೇ ಬೀಸುವ ಚಂಡಮಾರುತಗಳ ಹಾವಳಿ ವಿಪರೀತ. ಮಳೆಯ ಪರಿಮಾಣ ದ್ವೀಪದಿಂದ ದ್ವೀಪಕ್ಕೆ ವ್ಯತ್ಯಾಸವಾಗುವುದುಂಟು.
ಇಲ್ಲಿ ಉಷ್ಣವಲಯದ ಸಸ್ಯಗಳಿವೆ. ಮಹಾಗನಿ ಮತ್ತು ಸಿಡಾರ್ ಮುಖ್ಯವಾದ ಮರಗಳು. ಜಿಂಕೆ, ಕಪಿ, ಕತ್ತೆ, ಉರಗವರ್ಗದ ಪ್ರಾಣಿಗಳು, ಆಮೆ, ಹಾವು ಇವು ಮುಖ್ಯವಾದ ಪ್ರಾಣಿಗಳು. ಅನೇಕ ಬಗೆಯ ಮೀನುಗಳೂ ಉಂಟು. ಮೈದಾನ ಪ್ರದೇಶಗಳಲ್ಲಿ ಕೃಷಿ ಮುಖ್ಯ ಉದ್ಯೋಗ. ಕಬ್ಬು, ಕಾಫಿ, ಕೋಕೋ, ಹೊಗೆಸೊಪ್ಪು, ಬಾಳೆಹಣ್ಣು ಮತ್ತು ತರಕಾರಿಗಳು ಇಲ್ಲಿಯ ಮುಖ್ಯ ಬೆಳೆಗಳು. ಟ್ರಿನಿಡಾಡ್‍ನಲ್ಲಿ ಪೆಟ್ರೋಲಿಯಂ ಮತ್ತು ಬಾರ್ಬೇಡೋಸ್‍ನಲ್ಲಿ ಎಣ್ಣೆ ದೊರೆಯುತ್ತವೆ. ಟ್ರಿನಿಡಾಡ್ ಮತ್ತು ಮಾರ್ಟಿನೀಕ್‍ಗಳಲ್ಲಿ ಕಡ್ಡಾಯ ಶಿಕ್ಷಣ ಜಾರಿಯಲ್ಲಿದೆ. ಇಲ್ಲಿಯ ಜನರಲ್ಲಿ ಬಹು ಸಂಖ್ಯಾತರು ನೀಗ್ರೋಗಳು. ಬಿಳಿಯರೂ ಇದ್ದಾರೆ.

ಕ್ಯಾರಿಬೀ ದ್ವೀಪಗಳಲ್ಲಿ ಅನೇಕ ರಸ್ತೆಗಳುಂಟು. ಕತ್ತೆ ಇಲ್ಲಿ ಸಾಗಣೆಯ ಮುಖ್ಯ ಸಾಧನ. ಮುಖ್ಯ ವಾಯುಮಾರ್ಗಗಳಿಲ್ಲ. ಟ್ರಿನಿಡಾಡ್ ಮತ್ತು ಸೇಂಟ್ ಲೂಸಿಯಗಳಲ್ಲಿ ಉತ್ತಮ ಬಂದರುಗಳಿವೆ.  				(ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ